ಐರೋಪ್ಯ ವ್ಯೂಹ: ಇಂಗ್ಲೆಂಡು ಐರೋಪ್ಯ ರೇವುಪಟ್ಟಣಗಳೊಂದಿಗೆ ವ್ಯಾಪಾರ ನಡೆಸದಂತೆ ಫ್ರಾನ್ಸಿನ ಒಂದನೆಯ ನೆಪೋಲಿಯನ್ ಚಕ್ರವರ್ತಿ ವ್ಯವಸ್ಥೆಗೊಳಿಸಿದ್ದ ದಿಗ್ಬಂಧನ (ಕಾಂಟಿನೆಂಟಲ್ ಸಿಸ್ಟಮ್). 1793ರ ಯುದ್ಧದ ಆದಿಯಲ್ಲಿ ಫ್ರಾನ್ಸಿನ ಸಾರ್ವಜನಿಕ ಸುರಕ್ಷತಾ ಸಮಿತಿ ಮೊಟ್ಟಮೊದಲಿಗೆ ಇದನ್ನು ಪರಿಶೀಲಿಸಿತ್ತಾದರೂ ಆಗ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿರಲಿಲ್ಲ. 1803ರಲ್ಲಿ ಯುದ್ಧ ಮತ್ತೆ ಆರಂಭವಾದಾಗ ಇದನ್ನು ವಿಧಿಸಲಾಯಿತು. 1804 ನೆಪೋಲಿಯನ್ ಬ್ರಿಟಿಷ್ ವಸ್ತುಗಳ ಆಮದನ್ನು ನಿಷೇಧಿಸಿದ್ದಲ್ಲದೆ ಬ್ರಿಟಿಷ್ ಹಡಗುಗಳಿಗೆ ಫ್ರೆಂಚ್ ಮತ್ತು ಹ್ಯಾನೋವರ್ ಬಂದರುಗಳನ್ನು ಮುಚ್ಚಿದ. ಇದು ಬರ್ಲಿನ್ನಿನಿಂದ ಹೊರಡಿಸಲಾದ ಆಜ್ಞೆ. ಆದರೆ ಇಂಗ್ಲಿಷರು ಬಗ್ಗಲಿಲ್ಲ. ಅವರು ಫ್ರೆಂಚ್ ಬಂದರುಗಳನ್ನೆಲ್ಲ ಬಹಿಷ್ಕರಿಸಿದರು. ಅವುಗಳೊಂದಿಗೆ ವ್ಯಾಪಾರ ನಿಲ್ಲಿಸಿದರು. ಪ್ರತಿಯಾಗಿ ನೆಪೋಲಿಯನ್ ಇನ್ನೊಂದು ಹೆಜ್ಜೆ ಮುಂದೆ ಹೋದ. ಬ್ರಿಟಿಷ್ ದ್ವೀಪಗಳ ಸುತ್ತ ದಿಗ್ಬಂಧನ ವಿಧಿಸಿದ. ಬ್ರಿಟನ್ನಿನೊಂದಿಗಾಗಲಿ ಅದರ ಅಧೀನ ಪ್ರದೇಶಗಳೊಂದಿಗಾಗಲಿ ಯಾರೂ ವ್ಯಾಪಾರ ನಡೆಸದಂತೆ ಆ ಮಾರ್ಗವಾಗಿ ಹೋಗುವ ಹಡಗುಗಳನ್ನೆಲ್ಲ ವಶಪಡಿಸಿಕೊಳ್ಳಲು ಕಟ್ಟಾಜ್ಞೆ ಬಂತು. ಇದು ಮಿಲಾನ್ ಶಾಸನವೆಂದು ಹೆಸರಾಗಿದೆ. ಬ್ರಿಟನ್ನಿನ ಹೊಟ್ಟೆ ಬಿಗಿದು, ಉದ್ಯೋಗ ಬಿದ್ದು, ಸಾಮಾಜಿಕ ಅವ್ಯವಸ್ಥೆಯೇರ್ಪಟ್ಟು, ಅದು ಶಾಂತಿಗಾಗಿ ಮಂಡಿಯೂರಿ ಮುಂದೆ ಬರುವುದೆಂಬುದಾಗಿ ನೆಪೋಲಿಯನ್ ಭಾವಿಸಿದ್ದ.
ಈ ಭಾವನೆಗೆ ಅನುವಾಗಿ ನೆಪೋಲಿಯನ್ ಆಗ ಇಡೀ ಯುರೋಪಿನಲ್ಲೇ ಪ್ರಬಲ ವ್ಯಕ್ತಿಯಾಗಿದ್ದ ಶಕ್ತಿಯಾಗಿದ್ದ. ಅವನ ಕೀರ್ತಿ ಅತ್ಯಂತ ಉನ್ನತ ಮಟ್ಟದಲ್ಲಿತ್ತು. ಆಗ ಆತ ಫ್ರಾನ್ಸಿನ ಚಕ್ರವರ್ತಿ ಮಾತ್ರವೇ ಅಲ್ಲ, ಇಟಲಿಯ ರಾಜ. ಸ್ವಿಟ್ಜರ್ಲೆಂಡಿನಲ್ಲಿ ಅವನ ಮಾತು ಆಗ ವೇದವಾಕ್ಯ. ಮೂವರು ತಮ್ಮಂದಿರು ಅವನ ಅಧೀನರಾಜರಾಗಿದ್ದರು. ಒಬ್ಬ ಲೂಯಿ; ಹಾಲೆಂಡಿನ ರಾಜ. ಇನ್ನೊಬ್ಬ ಜೆರೋಮ್; ವೆಸ್ಟ್‌ಫೇಲಿಯದ ದೊರೆ. ನೇಪಲ್ಸ್‌ ದೇಶದ ರಾಜ ಸೋಸೆಫ್ ಮತ್ತೊಬ್ಬ. ಆಸ್ಟ್ರಿಯ ಪ್ರಷ್ಯಗಳು ನೆಪೋಲಿಯನನಿಗೆ ಸೋತು ಶರಣಾಗತವಾಗಿದ್ದುವು. ರಷ್ಯ ಮಿತ್ರರಾಷ್ಟ್ರವಾಗಿ ಪರಿವರ್ತನೆಗೊಂಡಿತ್ತು. ಯುರೋಪಿನ ಮುಖ್ಯ ರಾಷ್ಟ್ರವಾಗಿದ್ದ ಇಂಗ್ಲೆಂಡ್ ಇಷ್ಟಾದರೂ ಇನ್ನೂ ನೆಪೋಲಿಯನನ ಶತ್ರುವೇ ಆಗಿತ್ತು. ಬ್ರಿಟನ್ ಶರಣಾಗತವಾದರೆ ತನಗೆ ಬೇರೆ ಯಾರೂ ಅಡ್ಡಿಯಿಲ್ಲವೆಂಬುದು ಆಗ ನೆಪೋಲಿಯನ್ ತಳೆದಿದ್ದ ಭಾವನೆ. 

ಆದರೆ ನೆಪೋಲಿಯನನ ಬಳಿ ಸುವ್ಯವಸ್ಥಿತ ನೌಕಾಬಲವಿರಲಿಲ್ಲ. ಟ್ರಫಾಲ್ಗರ್ನಲ್ಲಿ ನಡೆದ ಜಲಯುದ್ಧ ಇದನ್ನು ಸ್ಪಷ್ಟಪಡಿಸಿತ್ತು. ಆದ್ದರಿಂದ ಇಂಗ್ಲೆಂಡ್ ದೇಶವನ್ನು ನೇರವಲ್ಲದ ಮಾರ್ಗದಿಂದ ತನ್ನ ಹತೋಟಿಗೆ ತಂದುಕೊಳ್ಳುವ ಪ್ರಯತ್ನ ನಡೆಸಿದ. ಇಂಗ್ಲೆಂಡಿನ ಶಕ್ತಿಗೆ ಆ ದೇಶ ನಡೆಸುತ್ತಿದ್ದ ವ್ಯಾಪಾರವೇ ಆಧಾರ. ಇಂಗ್ಲೆಂಡಿನ ವಾಣಿಜ್ಯ ಸಂಪರ್ಕವನ್ನು ಕುಂಠಿತಗೊಳಿಸುವುದರಿಂದ ಜಯಗಳಿಸಬಹುದೆಂದು ಅವನಿಗೆ ಅನಿಸಿದ್ದು ಸಹಜವೇ. ರಷ್ಯ ಕೂಡ ಟೆಲ್ಸಿಟ್ ಶಾಂತಿ ಒಪ್ಪಂದದ ಪ್ರಕಾರ ಇಂಥ ಶಾಸನಗಳ ಜಾರಿಗೆ ತನ್ನ ಅಂಗೀಕಾರ ಮುದ್ರೆ ಒತ್ತಿತ್ತು.
ಆದರೆ ನೆಪೋಲಿಯನನ ಈ ಯೋಜನೆ ಫಲಕಾರಿಯಾಗಲಿಲ್ಲ. ಏಕೆಂದರೆ ಇಂಗ್ಲೆಂಡು ಹೊಂದಿದ್ದ ವಾಣಿಜ್ಯ ಹಡಗುವ್ಯವಸ್ಥೆ ಅಗಾಧ. ಅದೂ ಅಲ್ಲದೆ ವಸಾಹತುಗಳನ್ನು ಹೊಂದಿದ್ದ ದೇಶಗಳು ತಮ್ಮ ವಸಾಹತುಗಳೊಡನೆ ನಡಸುತ್ತಿದ್ದ ಎಲ್ಲ ಆಮದು-ರಫ್ತುಗಳಿಗೂ ಇಂಗ್ಲೆಂಡಿನ ಹಡಗು ವ್ಯವಸ್ಥೆಯನ್ನೇ ಹೆಚ್ಚಾಗಿ ಅವಲಂಬಿಸಬೇಕಾಗಿತ್ತು. ಆದ್ದರಿಂದ ನೆಪೋಲಿಯನನ ದಿಗ್ಬಂಧನದಿಂದಾಗಿ ಐರೋಪ್ಯ ರಾಷ್ಟ್ರಗಳ ವ್ಯಾಪಾರ ಕುಸಿಯುವಂತಾಯಿತು. ಇದರ ಪರಿಣಾಮವಾಗಿ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆಗಳು ಏರಿದವು. ಹೆಚ್ಚಿನ ಕಷ್ಟನಷ್ಟ ಆದದ್ದು ಐರೋಪ್ಯರಿಗೇ ಹೊರತು ಬ್ರಿಟಿಷರಿಗಲ್ಲ. ಫ್ರಾನ್ಸಿನ ಮಿತ್ರರಾಷ್ಟ್ರಗಳಿಗೆ ನಿರಾಶೆಯಾಯಿತು. ಅವು ನೆಪೋಲಿಯನನ ಆಡಳಿತವನ್ನು ದ್ವೇಷಿಸತೊಡಗಿದ್ದರಿಂದ ಅವನಿಗಿದ್ದ ಬೆಂಬಲ ಕಡಿಮೆಯಾಯಿತು. ಈ ನಿರ್ಬಂಧಗಳನ್ನು ಕಠಿಣವಾಗಿ ಜಾರಿಗೆ ತರುವ ಭರದಲ್ಲಿ ನೆಪೋಲಿಯನ್ ಅನೇಕ ರಾಷ್ಟ್ರಗಳ ಮೇಲೆ ದಂಡೆತ್ತಿಹೋಗಬೇಕಾಯಿತು. ಇದರಿಂದ ಅವನ ಬಲ ಕುಂದಿತು. ಪೋರ್ಚುಗಲ್ಲಿನ ಮುತ್ತಿಗೆ, ನೆಪೋಲಿಯನನಿಂದ ಸ್ಪೇನಿನ ಸಿಂಹಾಸನದ ಆಕ್ರಮಣ, ಪೋಪನೊಡನೆ ಅವನ ಜಗಳ, ರಷ್ಯದ ಜಾರ್ ಚಕ್ರವರ್ತಿಯೊಡನೆ ವಿರಸ-ಇವೆಲ್ಲವೂ ಐರೋಪ್ಯವ್ಯೂಹವನ್ನು ಜಾರಿಗೆ ತರಲೇಬೇಕೆಂಬ ಹಠದ ಪರಿಣಾಮಗಳು. ರಷ್ಯದ ಚಕ್ರವರ್ತಿ ಇದನ್ನು ವಿರೋಧಿಸಿದಾಗ, ಆ ದೇಶದ ಮೇಲೆ 1812ರಲ್ಲಿ ನೆಪೋಲಿಯನ್ ದಂಡೆತ್ತಿಹೋದ. ಈ ವಿನಾಶಕಾರಿ ದಂಡಯಾತ್ರೆಯೇ ನೆಪೋಲಿಯನನ ಅವನತಿಗೆ ಅಡಿಗಲ್ಲು ಹಾಕಿತು.                      (ಎಸ್.ಕೆ.ಎಸ್.) 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ